ಅಧಿಕವರ್ಷ

4ರಿಂದ ಭಾಗವಾಗುವ ಕ್ರಿ.ಶ.ದ ವರ್ಷಸಂಖ್ಯೆ (ಲೀಪ್ ಇಯರ್). ಶತಮಾನ ವರ್ಷಗಳಿಗೆ ಮಾತ್ರ ಇರುವ ನಿಯಮ ಬೇರೆ (ಮುಂದೆ ವಿವರಿಸಿದೆ).
	
ಈ ಗಣನೆ ರೋಮ್‍ದೊರೆ ಜ್ಯೂಲಿಯಸ್ ಸೀಸರನ ಕಾಲದಿಂದ ಆರಂಭವಾಯಿತು. ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವ ವೇಳೆ 365.25636 ದಿವಸಗಳು; ಸ್ಥೂಲವಾಗಿ 3651/4 ದಿವಸಗಳು. ಅನುಕೂಲದೃಷ್ಟಿಯಿಂದ ವರ್ಷಕ್ಕೆ 365 ದಿವಸಗಳೆಂದು ತೆಗೆದುಕೊಂಡರೆ ನಾಲ್ಕು ವರ್ಷಗಳಿಗೊಮ್ಮೆ ಈ ಲೆಕ್ಕದಂತೆ ಒಂದು ದಿವಸವನ್ನು ಹೆಚ್ಚಿಸಬೇಕಾಗುತ್ತದೆ. ಈ ಹೆಚ್ಚು ದಿವಸ ಬರುವ ವರ್ಷ ಅಧಿಕವರ್ಷ. ಇದರಿಂದ ವರ್ಷದ ಸರಾಸರಿ ಅವಧಿ 365.25 ದಿವಸಗಳು ಆಗುತ್ತವೆ. ಇದು ಋತುಗಳು ನಿರ್ಮಿಸುವ ವರ್ಷಕ್ಕಿಂತ ಸ್ವಲ್ಪ ಅಧಿಕವಾಗುತ್ತದೆ. ದೋಷಪ್ರಮಾಣ 400 ವರ್ಷಗಳಲ್ಲಿ ಮೂರು ಅಧಿಕ ದಿವಸಗಳು. ಆದ್ದರಿಂದ 400 ವರ್ಷಗಳಲ್ಲಿ ಮೂರು ದಿವಸಗಳಷ್ಟು ಕಳೆಯಬೇಕು. ಶತಮಾನದ ಸಂಖ್ಯೆ 4 ರಿಂದ ಭಾಗವಾದರೆ ಮಾತ್ರ (ಉದಾ: 2000, 2400, ಇತ್ಯಾದಿ; 1900, 2100, ಇತ್ಯಾದಿ ಅಲ್ಲ) ಆ ಶತಮಾನದ ಆರಂಭವರ್ಷ ಅಧಿಕವರ್ಷವೆಂದು ಪೋಪ್ ಗ್ರೆಗೊರಿ ತೀರ್ಮಾನಿಸಿದ. ಈ ತೀರ್ಮಾನದಂತೆ, ವರ್ಷದ ಸರಾಸರಿ ಅವಧಿ 365.2425 ದಿವಸಗಳು ಆಗುತ್ತವೆಯಲ್ಲದೆ 400 ವರ್ಷಗಳಲ್ಲಿ 97 ಅಧಿಕವರ್ಷಗಳಿರುತ್ತವೆ. ಗ್ರೆಗೊರಿಯ ವರ್ಷಮಾನ ಋತುಗಳ ದೃಷ್ಟಿಯಿಂದ ಕಿಂಚಿತ್ ಅಧಿಕವಾಗಿ, 4000 ವರ್ಷಗಳಲ್ಲಿ ಸುಮಾರು ಒಂದು ದಿವಸದಷ್ಟು ದೋಷ ಪ್ರಮಾಣವುಂಟಾಗುತ್ತದೆ.       
(ಸಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ